Karnataka Lokayukta
Karnataka Lokayukta

        ನಾಗರೀಕರ ಕುಂದುಕೊರತೆಗಳ ನಿವಾರಣೆ ಮುಖ್ಯ ವಿಷಯವಾಗಿ ಪರಿಗಣಿಸಿ ಭಾರತದ ಪ್ರಧಾನ ಮಂತ್ರಿಯಾಗಿದ್ದ ದಿವಂಗತ ಶ್ರೀ ಮೊರಾರ್ಜಿ ದೇಸಾಯಿಯವರು ನೇತೃತ್ವ ವಹಿಸಿದ್ದ ಆಡಳಿತ ಸುಧಾರಣಾ ಸಮಿತಿ ತನ್ನ ಮೊದಲನೆಯ ವರದಿಯನ್ನು ಸಲ್ಲಿಸಿರುತ್ತದೆ. ಆಡಳಿತಾತ್ಮಕ ಕ್ರಮಗಳನ್ನು ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಅಥವಾ ಕೆಲವು ಸಾರ್ವಜನಿಕ ಪ್ರಾಧಿಕಾರಗಳ ಪರವಾಗಿ ತನಿಖೆ ಮಾಡುವ ಮೂಲಕ ನಾಗರೀಕರ ಕುಂದುಕೊರತೆಗಳನ್ನು ನಿವಾರಿಸಲು ಲೋಕಪಾಲ್ ಮತ್ತು ಲೋಕಾಯುಕ್ತ ಸಂಸ್ಥೆಗಳನ್ನು ಅನುಕ್ರಮವಾಗಿ ಕೇಂದ್ರ ಮತ್ತು ರಾಜ್ಯ ಮಟ್ಟದಲ್ಲಿ ಸ್ಥಾಪನೆ ಮಾಡಲು ಸದರಿ ವರದಿಯಲ್ಲಿ ಶಿಫಾರಸ್ಸು ಮಾಡಿರುತ್ತದೆ. ಸಂಬ೦ಧಿಸಿದ ಸರ್ಕಾರದಿಂದ ಸ್ವತಂತ್ರವಾಗಿ ಈ ಸಂಸ್ಥೆಗಳು ಸೇವೆ ಸಲ್ಲಿಸಬೇಕೆಂದು ಮತ್ತು ಭಾರತದ ಸರ್ವೋಚ್ಛ ನ್ಯಾಯಾಲಯದ ನ್ಯಾಯಮೂರ್ತಿ ಅಥವಾ ರಾಜ್ಯದ ಉಚ್ಛ ನ್ಯಾಯಾಲಯದ ಮುಖ್ಯ ನ್ಯಾಯಮೂರ್ತಿಗಳ ನೇತೃತ್ವದಲ್ಲಿ ಈ ಸಂಸ್ಥೆಗಳು ನ್ಯಾಯಾಂಗ ಸಂಸ್ಥೆಗಳಿಗೆ ಪೂರಕವಾಗಿ ಕಾರ್ಯ ನಿರ್ವಹಿಸಬೇಕೆಂದು ಉದ್ದೇಶಿಸಲಾಗಿರುತ್ತದೆ.

        ಆಡಳಿತ ಯಂತ್ರದಲ್ಲಿರುವ ಭ್ರಷ್ಟಾಚಾರ, ಸ್ವಜನಪಕ್ಷಪಾತ ಮತ್ತು ಅಧಿಕಾರಶಾಹಿ ಅಶಿಸ್ತಿನಂತಹ ಪ್ರಕರಣಗಳೂ ಸೇರಿದಂತಹ ಆಡಳಿತಾತ್ಮಕ ಕ್ರಮಗಳ ವಿರುದ್ಧದ ದೂರುಗಳನ್ನು ಪರಿಶೀಲನೆ ಮಾಡಿ ಸಾರ್ವಜನಿಕ ಆಡಳಿತದ ಮಾನದಂಡಗಳನ್ನು ಸುಧಾರಣೆ ಮಾಡಲು ರಾಜ್ಯ ಮಟ್ಟದಲ್ಲಿ ಲೋಕಾಯುಕ್ತರ ನೇಮಕಾತಿಯನ್ನು ಈ ವರದಿಯಲ್ಲಿ ಸೂಚಿಸಿರುವಂತೆ ಶಿಫಾರಸ್ಸು ಮಾಡಲಾಗಿರುತ್ತದೆ. ಭಾರತ ಸಂವಿಧಾನದ ೭ ನೇ ಅನುಸೂಚಿಯಲ್ಲಿರುವ ೨ ಅಥವಾ ೩ ನೇ ಪಟ್ಟಿಗಳಲ್ಲಿ ನಿರ್ದಿಷ್ಟಪಡಿಸಿರುವ ವಿಷಯಗಳಿಗೆ ಸಂಬ೦ಧಪಟ್ಟ ಆಡಳಿತಾತ್ಮಕ ಕ್ರಮಗಳಿಗೆ ಸಂಬ೦ಧಿಸಿದ ಆಪಾದನೆಗಳನ್ನು ಅಥವಾ ಕುಂದುಕೊರತೆಗಳನ್ನು ತನಿಖೆ ಮಾಡಲು ಸದರಿ ವರದಿಯ ಶಿಫಾರಸ್ಸಿನ ಮೇರೆಗೆ ಕರ್ನಾಟಕ ರಾಜ್ಯ ಶಾಸಕಾಂಗ ಕರ್ನಾಟಕ ಲೋಕಾಯುಕ್ತ ಕಾಯಿದೆ, ೧೯೮೪ ನ್ನು ರೂಪಿಸಿರುತ್ತದೆ.

        ಸಾರ್ವಜನಿಕ ನೌಕರರ ವರ್ತನೆಗೆ ಸಂಬ೦ಧಪಟ್ಟ ಆಪಾದನೆಗಳನ್ನು ಅಥವಾ ಕುಂದುಕೊರತೆಗಳನ್ನು ತನಿಖೆ ಮಾಡಿ ವರದಿ ಮಾಡಲು ಲೋಕಾಯುಕ್ತರ ಮತ್ತು ಒಬ್ಬ ಅಥವಾ ಅದಕ್ಕಿಂತಲೂ ಹೆಚ್ಚಿನ ಉಪಲೋಕಾಯುಕ್ತರ ನೇಮಕಾತಿಗೆ ಈ ಕಾಯಿದೆ ಅವಕಾಶ ಕಲ್ಪಿಸುತ್ತದೆ. ಈ ಕಾಯಿದೆಯ ಅಡಿಯಲ್ಲಿ ಬರುವ ಸಾರ್ವಜನಿಕ ನೌಕರರೆಂದರೆ :-
(1) ಮುಖ್ಯಮಂತ್ರಿ;
(2) ಎಲ್ಲಾ ಇತರೆ ಮಂತ್ರಿಗಳು ಮತ್ತು ರಾಜ್ಯ ಶಾಸಕಾಂಗದ ಸದಸ್ಯರು;
(3) ಎಲ್ಲಾ ರಾಜ್ಯ ಸರ್ಕಾರದ ಅಧಿಕಾರಿಗಳು;
(4) ಸಹಕಾರ ಸಂಘಗಳನ್ನೂ ಒಳಗೊಂಡಂತೆ ರಾಜ್ಯ ಶಾಸಕಾಂಗದ ಯಾವುದೇ ಕಾನೂನಿನ ಅಡಿಯಲ್ಲಿ ಸ್ಥಾಪಿತವಾದ ಅಥವಾ ಸ್ಥಳೀಯ ಪ್ರಾಧಿಕಾರಗಳ, ಶಾಸನಬದ್ಧ ಸಂಸ್ಥೆಗಳ ಅಥವಾ ನಿಗಮಗಳ ಅಧ್ಯಕ್ಷರು, ಉಪಾಧ್ಯಕ್ಷರು
(5) ರಾಜ್ಯ ಸರ್ಕಾರದ ಒಡೆತನದಲ್ಲಿರುವ ಅಥವಾ ನಿಯಂತ್ರಣಕ್ಕೆ ಒಳಪಟ್ಟ ಸ್ಥಳೀಯ ಪ್ರಾಧಿಕಾರಗಳ, ನಿಗಮಗಳ, ರಾಜ್ಯ ಸರ್ಕಾರ ಶೇಕಡಾ 50 ಕ್ಕಿಂತಲೂ ಕಡಿಮೆ ಇಲ್ಲದಂತೆ ಷೇರುಗಳನ್ನು ಹೊಂದಿರುವ ಕಂಪನಿ, ರಾಜ್ಯ ನೋಂದಣಿ ಕಾಯಿದೆಯ ಅಡಿಯಲ್ಲಿ ನೋಂದಾಯಿಸಲಾದ ಸಂಘಗಳ, ಶಾಸಕಾಂಗದಿಂದ ಅಥವಾ ಶಾಸಕಾಂಗದ ಯಾವುದೇ ಕಾನೂನಿನ ಪ್ರಕಾರ ಸ್ಥಾಪಿತವಾದ ಸಹಕಾರ ಸಂಘಗಳ ಮತ್ತು ವಿಶ್ವವಿದ್ಯಾಲಯಗಳ ಸೇವೆಯಲ್ಲಿರುವ ವ್ಯಕ್ತಿಗಳು.

        ಸಂದರ್ಭಾನುಸಾರವಾಗಿ ಲೋಕಾಯುಕ್ತರಾಗಲೀ ಅಥವಾ ಉಪಲೋಕಾಯುಕ್ತರಾಗಲೀ ದೂರಿನ ತನಿಖೆಯನ್ನು ಕೈಗೊಂಡು ಮೇಲ್ನೋಟಕ್ಕೆ ಸಾರ್ವಜನಿಕ ನೌಕರನ ವಿರುದ್ಧ ಮಾಡಲಾದ ಆಪಾದನೆ ಸತ್ಯವೆಂದು ತಿಳಿದು ಅಂತಹ ಸಾರ್ವಜನಿಕ ನೌಕರನ ಹುದ್ದೆಗೆ ಸಂಬಂಧಿಸಿನೀಡಿದ ತೀರ್ಪನ್ನು ಸಕ್ಷಮ ಪ್ರಾಧಿಕಾರ ಸಮ್ಮತಿಸಿದಾಗ ಅಂತಹ ತೀರ್ಪು ನೀಡಿದ ದಿನಾಂಕದಿಂದ ಜಾರಿಗೆ ಬರುವಂತೆ ಸಂಬಂಧಪಟ್ಟ ಸಾರ್ವಜನಿಕ ನೌಕರ, ಅವನು ಮುಖ್ಯಮಂತ್ರಿಯಾಗಿರಲೀ ಅಥವಾ ಯಾವುದೇ ಇತರೆ ಸಚಿವ ಅಥವಾ ರಾಜ್ಯ ಶಾಸಕಾಂಗಸಭೆಯ ಸದಸ್ಯನಾಗಿರಲೀ ತನ್ನ ಹುದ್ದೆಗೆ ರಾಜೀನಾಮೆಯನ್ನು ಕೊಡಬೇಕು ಮತ್ತು ಅವನು ಬೇರೆ ಅಧಿಕೃತವಲ್ಲದ ವ್ಯಕ್ತಿಯಾಗಿದ್ದರೆ ಅವನು ತನ್ನ ಹುದ್ದೆಯನ್ನು ತ್ಯಜಿಸಿದಂತೆ ಪರಿಭಾವಿಸಬೇಕು ಮತ್ತು ಅವನು ಸರ್ಕಾರಿ ನೌಕರನಾಗಿದ್ದರೆ ಅವನನ್ನು ಅಮಾನತ್ತಿನಲ್ಲಿಟ್ಟಂತೆ ಪರಿಭಾವಿಸಬೇಕು.

        ಕರ್ನಾಟಕ ಲೋಕಾಯುಕ್ತ ಕಾಯಿದೆ, 1984 ರ ಕಲಂ 14 ರ ಪ್ರಕಾರ ಯಾವುದೇ ದೂರಿನ ತನಿಖೆಯನ್ನು ಕೈಗೊಂಡ ನಂತರ ಸಾರ್ವಜನಿಕ ನೌಕರ ಯಾವುದೇ ಅಪರಾಧವನ್ನು ಎಸಗಿರುವುದು ಲೋಕಾಯುಕ್ತರಿಗಾಗಲೀ ಅಥವಾ ಉಪಲೋಕಾಯುಕ್ತರಿಗಾಗಲೀ ಮನವರಿಕೆಯಾಗಿ ಅಂತಹ ಅಪರಾಧಕ್ಕೆ ಅವನನ್ನು ನ್ಯಾಯಾಲಯದಲ್ಲಿ ಅಭಿಯೋಜನೆಗೆ ಒಳಪಡಿಸಬೇಕೆಂದು ಅವರು ಪರಿಭಾವಿಸಿದಾಗ ಅದನ್ನು ಜಾರಿಗೆ ತರಲು ಅವರು ಆದೇಶವನ್ನು ಹೊರಡಿಸಬಹುದು ಮತ್ತು ಅಂತಹ ಅಭಿಯೋಜನೆಗೆ ಯಾವುದಾದರೂ ಪ್ರಾಧಿಕಾರದ ಪೂರ್ವಾನುಮತಿಯ ಅವಶ್ಯಕತೆ ಇದ್ದರೆ ಯಾವುದೇ ಕಾನೂನಿನ ಹೊರತಾಗಿಯೂ ಅಂತಹ ಆದೇಶ ಮಾಡಿದ ದಿನಾಂಕದಿಂದ ಸಕ್ಷಮ ಪ್ರಾಧಿಕಾರ ಅಂತಹ ಆದೇಶವನ್ನು ನೀಡಿರುವಂತೆ ಪರಿಭಾವಿಸಬೇಕು. ತನಿಖೆಯ ನಂತರ, ಸಾರ್ವಜನಿಕ ನೌಕರ ಯಾವುದೇ ಕ್ರಿಮಿನಲ್ ಅಪರಾಧವನ್ನು ಮಾಡಿರುವುದು ಸಂದರ್ಭಕ್ಕೆ ಅನುಸಾರವಾಗಿ ಲೋಕಾಯುಕ್ತರಿಗೆ ಅಥವಾ ಉಪಲೋಕಾಯುಕ್ತರಿಗೆ ಮನವರಿಕೆಯಾದರೆ ಬೇರೆ ಯಾವ ಪ್ರಾಧಿಕಾರಕ್ಕೂ ಉಲ್ಲೇಖಿಸದೆ ಅವರು ಅಭಿಯೋಜನೆಗೆ ಮುಂದಾಗಬಹುದು. ಯಾವುದೇ ಕಾನೂನಿನ ಅಡಿಯಲ್ಲಿ ಯಾವುದೇ ಪೂರ್ವಾನುಮತಿಯ ಅಗತ್ಯ ಕಂಡು ಬಂದರೆ ಅಂತಹ ಅಭಿಯೋಜನೆಗೆ ಅನುಮತಿಯನ್ನು ನೀಡಲಾಗಿದೆ ಎಂದು ಪರಿಭಾವಿಸತಕ್ಕದ್ದು. ಸಾರ್ವಜನಿಕ ನೌಕರರ ಭ್ರಷ್ಟಾಚಾರದ ವಿರುದ್ಧದ ದೂರುಗಳಿಗೆ ಸಂಬಂಧಿಸಿಕಾರ್ಯ ನಿರ್ವಹಿಸಲು ಯಾವುದೇ ರಾಜ್ಯದಲ್ಲಿ ಇದುವರೆಗೂ ಲೋಕ್ಪಾಲ್ ಅಥವಾ ಲೋಕಾಯುಕ್ತ ಸಂಸ್ಥೆಯನ್ನು ಸ್ಥಾಪನೆ ಮಾಡದೆ ಇದ್ದರೆ, ಲೋಕ್ಪಾಲ್ ಮತ್ತು ಲೋಕಾಯುಕ್ತ ಕಾಯಿದೆ, 2013 ರ ಕಲಂ 63 ರ ಅಡಿಯಲ್ಲಿ ಅಂತಹ ರಾಜ್ಯದಲ್ಲಿ ರಾಜ್ಯ ಶಾಸಕಾಂಗ ಕಾನೂನು ಪ್ರಕಾರವಾಗಿ ಲೋಕಾಯುಕ್ತ ಸಂಸ್ಥೆಯನ್ನು ರಚಿಸಬೇಕು/ಸ್ಥಾಪಿಸಬೇಕು.

        ಲೋಕಾಯುಕ್ತರಾಗಿ ನೇಮಕ ಮಾಡಲು ಸರ್ವೋಚ್ಛ ನ್ಯಾಯಾಲಯದಲ್ಲಿ ನ್ಯಾಯಮೂರ್ತಿಯಾಗಿ ಅಥವಾ ಉಚ್ಛ ನ್ಯಾಯಾಲಯದಲ್ಲಿ ಮುಖ್ಯ ನ್ಯಾಯಮೂರ್ತಿಯಾಗಿ ಅಥವಾ ಉಚ್ಛ ನ್ಯಾಯಾಲಯದಲ್ಲಿ 10 ವರ್ಷಗಳಿಗಿಂತಲೂ ಹೆಚ್ಚು ಕಾಲ ನ್ಯಾಯಮೂರ್ತಿಯಾಗಿ ಸೇವೆ ಸಲ್ಲಿಸಿರಬೇಕು. ಉಪಲೋಕಾಯುಕ್ತರಾಗಿ ನೇಮಕ ಮಾಡಲು ಉಚ್ಛ ನ್ಯಾಯಾಲಯದಲ್ಲಿ 5 ವರ್ಷಗಳಿಗಿಂತಲೂ ಹೆಚ್ಚು ಕಾಲ ನ್ಯಾಯಮೂರ್ತಿಯಾಗಿ ಸೇವೆ ಸಲ್ಲಿಸಿರಬೇಕು. ಕರ್ನಾಟಕ ಉಚ್ಛ ನ್ಯಾಯಾಲಯದ ಮುಖ್ಯ ನ್ಯಾಯಮೂರ್ತಿಗಳು, ಕರ್ನಾಟಕ ವಿಧಾನ ಪರಿಷತ್ತಿನ ಅಧ್ಯಕ್ಷರು, ಕರ್ನಾಟಕ ಶಾಸಕಾಂಗ ಸಭೆಯ ಸಭಾಪತಿಯ ಮತ್ತು ಕರ್ನಾಟಕ ಶಾಸಕಾಂಗ ಸಭೆಯ ವಿರೋಧ ಪಕ್ಷದ ನಾಯಕರೊಡನೆ ಸಮಾಲೋಚಿಸಿ ಮುಖ್ಯ ಮಂತ್ರಿಗಳು ನೀಡುವ ಸಲಹೆಯ ಮೇರೆಗೆ ರಾಜ್ಯಪಾಲರು ಲೋಕಾಯುಕ್ತ ಮತ್ತು ಉಪಲೋಕಾಯುಕ್ತರನ್ನು ನೇಮಕ ಮಾಡುತ್ತಾರೆ. ಕರ್ನಾಟಕ ಲೋಕಾಯುಕ್ತ ಕಾಯಿದೆ, 1985 ರ ಕಲಂ 6 ರ ಪ್ರಕಾರ ಲೋಕಾಯುಕ್ತರ ಸೇವೆಗೆ ಸಂಬಂಧಪಟ್ಟ ಷರತ್ತುಗಳು ಭಾರತದ ಮುಖ್ಯ ನ್ಯಾಯಮೂರ್ತಿಗಳಿಗೆ ಅನ್ವಯಿಸುವ ಷರತ್ತುಗಳಿಗೆ ಸಮಾನವಾಗಿರುತ್ತವೆ ಹಾಗೂ ಉಪಲೋಕಾಯುಕ್ತರ ಸೇವೆಗೆ ಸಂಬಂಧಪಟ್ಟ ಷರತ್ತುಗಳು ಉಚ್ಛ ನ್ಯಾಯಾಲಯದ ನ್ಯಾಯಮೂರ್ತಿಗೆ ಅನ್ವಯಿಸುವ ಷರತ್ತುಗಳಿಗೆ ಸಮಾನವಾಗಿರುತ್ತವೆ.

        ಲೋಕಾಯುಕ್ತ ಸಂಸ್ಥೆಯ ಎಲ್ಲಾ ಅಧಿಕಾರಿಗಳು ಮತ್ತು ಸಿಬ್ಬಂದಿ ವರ್ಗದವರು ಲೋಕಾಯುಕ್ತ ಮತ್ತು ಉಪಲೋಕಾಯುಕ್ತರಿಗೆ ಸಹಕರಿಸಬೇಕು. ಲೋಕಾಯುಕ್ತರಿಗೆ ಮತ್ತು ಉಪಲೋಕಾಯುಕ್ತರಿಗೆ ಸಹಕರಿಸುವ ಅಧಿಕಾರಿಗಳ ಮತ್ತು ನೇಮಕಗೊಂಡ/ನಿಯೋಜನೆಗೊಂಡ ಸಿಬ್ಬಂದಿ ವರ್ಗದವರ ವಿಭಾಗಗಳು, ನೇಮಕಾತಿ ಮತ್ತು ಸೇವಾ ಷರತ್ತುಗಳನ್ನು ಲೋಕಾಯುಕ್ತರೊಡನೆ ಸಮಾಲೋಚಿಸಿ ಅಧಿಕಾರಿಗಳು ಮತ್ತು ನೇಮಕಗೊಂಡ/ನಿಯೋಜನೆಗೊಂಡ ಸಿಬ್ಬಂದಿ ವರ್ಗದವರು ತಮ್ಮ ಕಾರ್ಯಗಳನ್ನು ನಿರ್ಭೀತಿಯಿಂದ ಕೈಗೊಳ್ಳಲು ಅನುವಾಗುವ ರೀತಿಯಲ್ಲಿ ನಿಗದಿಪಡಿಸತಕ್ಕದ್ದು. ಲೋಕಾಯುಕ್ತ ಸಂಸ್ಥೆಯ ಅಧಿಕಾರಿಗಳು ಮತ್ತು ಸಿಬ್ಬಂದಿ ಲೋಕಾಯುಕ್ತರ ಆಡಳಿತಾತ್ಮಕ ಮತ್ತು ಶಿಸ್ತಿನ ನಿಯಂತ್ರಣಕ್ಕೆ ಒಳಪಟ್ಟಿರುತ್ತಾರೆ.

        ಸಿ. ರಂಗಸ್ವಾಮಯ್ಯ ಮತ್ತು ಇತರರ ವಿರುದ್ಧ ಕರ್ನಾಟಕ ಲೋಕಾಯುಕ್ತ ಮತ್ತು ಇತರರ ಪ್ರಕರಣ (1998) 6 ಎಸ್‍ಸಿಸಿ 66 ರಲ್ಲಿ ಲೋಕಾಯುಕ್ತ ಸಂಸ್ಥೆಯ ಸ್ವಾತಂತ್ರ್ಯ ಮತ್ತು ಪರಿಣಾಮಕಾರಿಯಾದ ಕಾರ್ಯಾಚರಣೆ ಅತ್ಯಂತ ಪ್ರಾಮುಖ್ಯತೆಯನ್ನು ಪಡೆದಿದೆ ಎನ್ನುವುದನ್ನು ಗೌರವಾನ್ವಿತ ಸರ್ವೋಚ್ಚ ನ್ಯಾಯಾಲಯ ಗಮನಿಸಿರುತ್ತದೆ. ಆಂಧ್ರಪ್ರದೇಶದ ಲೋಕಾಯುಕ್ತ/ಉಪಲೋಕಾಯುಕ್ತ ಸಂಸ್ಥೆಯ ವಿರುದ್ಧ ಟಿ. ರಾಮಸುಬ್ಬ ರೆಡ್ಡಿ (1997) 9 ಎಸ್‍ಸಿಸಿ 42 ರ ಪ್ರಕರಣದಲ್ಲಿ ಅತ್ಯುನ್ನತ ನ್ಯಾಯಾಂಗದ ವ್ಯಕ್ತಿಗಳು ಲೋಕಾಯುಕ್ತ ಸಂಸ್ಥೆಯ ನೇತೃತ್ವ ವಹಿಸಿದ ಸಂದರ್ಭದಲ್ಲಿ ಅವರ ಅಭಿಪ್ರಾಯಗಳು ಕೇವಲ ಕಾಗದದ ಮೇಲಿನ ನಿರ್ದೇಶನಗಳಾಗಿ ಉಳಿಯದ ರೀತಿಯಲ್ಲಿ ಅಂತಹ ಅಧಿಕಾರಿಗಳಿಗೆ ಸೂಕ್ತವಾದ ಅಧಿಕಾರದ ಬಲವಿರಬೇಕು ಎಂದು ಗೌರವಾನ್ವಿತ ಸವೋಚ್ಛ ನ್ಯಾಯಾಲಯ ಅಭಿಪ್ರಾಯಪಟ್ಟಿದೆ. ಕರ್ನಾಟಕ ರಾಜ್ಯದ ಗೌರವಾನ್ವಿತ ಉಚ್ಛ ನ್ಯಾಯಾಲಯ ಶ್ರೀ ಜೆ.ಪಿ. ಪ್ರಕಾಶ್‍ರವರ ವಿರುದ್ಧ ಕರ್ನಾಟಕ ರಾಜ್ಯ ಮತ್ತು ಇತರರ ಪ್ರಕರಣದಲ್ಲಿ (ರಿಟ್ ಅರ್ಜಿ ಸಂಖ್ಯೆ 5361/2016 (ಎಸ್-ಕೆಎಟಿ), ದಿನಾಂಕ: 06/04/2016 (ಡಿಬಿ) ರಲ್ಲಿ ಗಮನಿಸಿರುವಂತೆ ಲೋಕಾಯುಕ್ತ ಅಥವಾ ಉಪಲೋಕಾಯುಕ್ತರು ಕರ್ನಾಟಕ ಲೋಕಾಯುಕ್ತ ಕಾಯಿದೆಯ ಕಲಂ 12 (3) ರ ಅಡಿಯಲ್ಲಿ ವಿಚಾರಣೆ ಕೈಗೊಳ್ಳಲು ಶಿಫಾರಸ್ಸು ಮಾಡಿದ ಸಂದರ್ಭದಲ್ಲಿ ಸಕ್ಷಮ ನ್ಯಾಯಾಲಯ ಅಂತಹ ಶಿಫಾರಸ್ಸನ್ನು ತಳ್ಳಿ ಹಾಕಿದ ಸಂದರ್ಭ ಅಥವಾ ವಿಶೇಷವಾದ ಸನ್ನಿವೇಶಗಳ ಮತ್ತು ಪ್ರಬಲವಾದ ಕಾರಣಗಳ ಹೊರತಾಗಿ ಸರ್ಕಾರ ಅಂತಹ ಶಿಫಾರಸ್ಸನ್ನು ಅಲ್ಲಗಳೆಯಲಾಗದು. ಗೌರವಾನ್ವಿತ ಲೋಕಾಯುಕ್ತ ಮತ್ತು ಮತ್ತೊಬ್ಬರ ವಿರುದ್ಧ ಶ್ರೀ ಪ್ರಕಾಶ್ ಟಿ.ವಿ. ಮತ್ತು ಇತರರ ಪ್ರಕರಣದಲ್ಲಿ (ರಿಟ್ ಅರ್ಜಿ ಸಂಖ್ಯೆ 29212/2017 (ಎಸ್-ಕೆಇಟಿ) ಸಿ/ಡಬ್ಲ್ಯೂ ರಿಟ್ ಅರ್ಜಿ ಸಂಖ್ಯೆ: 29213/2017 ಹಾಗೂ 38938/2018 (ಎಸ್-ಕೆಎಟಿ), ದಿನಾಂಕ: 29/06/2021 ರ ಪ್ರಕರಣದಲ್ಲಿ ಕರ್ನಾಟಕ ಉಚ್ಛ ನ್ಯಾಯಾಲಯದ ವಿಭಾಗೀಯ ಪೀಠ ಶಾಸನಬದ್ಧ ಸಂಸ್ಥೆಯಾದ ಕರ್ನಾಟಕ ಲೋಕಾಯುಕ್ತವನ್ನು ಭ್ರಷ್ಟಾಚಾರದ ಪಿಡುಗನ್ನು ನಿರ್ಮೂಲನೆ ಮಾಡಲು ರಚಿಸಲಾಗಿದ್ದು ಸದರಿ ಸಂಸ್ಥೆ ಸಾಂಸ್ಥಿಕ ಆಸಕ್ತಿಯನ್ನು ಹೊಂದಿರುವುದಲ್ಲದೆ ಕರ್ನಾಟಕ ರಾಜ್ಯ ಆಡಳಿತಾತ್ಮಕ ನ್ಯಾಯಮಂಡಳಿಗೆ ಹೊರಡಿಸಲಾದ ಆದೇಶಗಳನ್ನು ಪ್ರಶ್ನಿಸುವ ಅಧಿಕಾರವನ್ನು ಸಹ ಹೊಂದಿರುತ್ತದೆ ಎನ್ನುವ ಅಂಶವನ್ನು ಎತ್ತಿಹಿಡಿದಿರುತ್ತದೆ.

        ಸಾರ್ವಜನಿಕ ನೌಕರನ ವರ್ತನೆಯಿಂದ ತೊಂದರೆಗೆ ಒಳಗಾದ ವ್ಯಕ್ತಿ ಅಥವಾ ದುರಾಡಳಿತ, ಭ್ರಷ್ಟಾಚಾರ, ದುರ್ನಡತೆ ಅಥವಾ ಅಧಿಕಾರಶಾಹಿ ಅಶಿಸ್ತಿನಂತಹ ಪ್ರಕರಣಗಳಲ್ಲಿ ನಿಗದಿತ ಅರ್ಜಿ ನಮೂನೆಯಲ್ಲಿ ಲೋಕಾಯುಕ್ತ ಸಂಸ್ಥೆಗೆ ದೂರನ್ನು ಸಲ್ಲಿಸಲು ಈ ಕಾಯಿದೆ ಅವಕಾಶ ಕಲ್ಪಿಸುತ್ತದೆ. ಅಂತಹ ದೂರಿನ ತನಿಖೆ ಕೈಗೊಂಡ ನಂತರ ಲೋಕಾಯುಕ್ತರಿಗಾಗಲೀ ಅಥವಾ ಉಪಲೋಕಾಯುಕ್ತರಿಗಾಗಲೀ ಸಾರ್ವಜನಿಕ ನೌಕರನ ಅಂತಹ ಕ್ರಮದಿಂದ ಫಿರ್ಯಾದುದಾರನಿಗೆ ಅಥವಾ ಬೇರಾವುದೇ ವ್ಯಕ್ತಿಗೆ ಅನ್ಯಾಯ ಅಥವಾ ಅನಾವಶ್ಯಕ ತೊಂದರೆ ಉಂಟಾಗಿರುವುದು ಮನವರಿಕೆಯಾದರೆ ಸಾರ್ವಜನಿಕ ನೌಕರನಿಗೆ ಸಂಬಂಧಪಟ್ಟ ಸಕ್ಷಮ ಪ್ರಾಧಿಕಾರಕ್ಕೆ ಕುಂದುಕೊರತೆಗಳನ್ನು ಪರಿಹರಿಸಲು ಮತ್ತು ಅಂತಹ ದುರ್ನಡತೆಯಿಂದ ವರ್ತಿಸಿದ ಸಾರ್ವಜನಿಕ ನೌಕರನ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಲು ಶಿಫಾರಸ್ಸು ಮಾಡಲಾಗುವುದು. ಪ್ರಕರಣಗಳ ತನಿಖೆಯನ್ನು ಕೈಗೊಳ್ಳುವಂತೆ ಲೋಕಾಯುಕ್ತರಿಗೆ ಅಥವಾ ಉಪಲೋಕಾಯುಕ್ತರಿಗೆ ಸರ್ಕಾರವು ವಹಿಸಿಕೊಡುವ ಅವಕಾಶವನ್ನು ಕಾಯಿದೆ ಕಲ್ಪಿಸಿದೆ.

         ಕರ್ನಾಟಕ ಲೋಕಾಯುಕ್ತ ಸಂಸ್ಥೆ ವಿಚಾರಣಾ ವಿಭಾಗ, ತಾಂತ್ರಿಕ ವಿಭಾಗ ಮತ್ತು ಪೊಲೀಸ್ ವಿಭಾಗಗಳಿಂದ ಕೂಡಿರುತ್ತದೆ. ನ್ಯಾಯಾಂಗದ ಅಧಿಕಾರಿಗಳು ಮತ್ತು ಅಭಿಯೋಜಕರು/ಮಂಡನಾಧಿಕಾರಿಗಳು ವಿಚಾರಣಾ ವಿಭಾಗದಲ್ಲಿರುತ್ತಾರೆ. ಸಾರ್ವಜನಿಕ ನೌಕರರು ಕೈಗೊಳ್ಳುವ ಕಳಪೆ ಕಾಮಗಾರಿಗಳ ಮತ್ತು ಸರ್ಕಾರಿ ಹಣದ ದುರುಪಯೋಗದ ವಿರುದ್ಧ ಮಾಡಲಾದ ಆರೋಪಗಳಿಗೆ ಸಂಬಂಧಿಸಿ ತಜ್ಞ ಪರೀಕ್ಷೆಯ ಅಗತ್ಯವಿರುವ ಸಂಗತಿಗಳನ್ನು ಲೋಕಾಯುಕ್ತ/ಉಪಲೋಕಾಯುಕ್ತರು ಸೂಚಿಸಿದಾಗ ತಾಂತ್ರಿಕ ವಿಭಾಗದ ಅಭಿಯಂತರರು ಮತ್ತು ಲೆಕ್ಕ ಪರಿಶೋಧಕರು ತನಿಖೆಯನ್ನು ಕೈಗೊಳ್ಳುತ್ತಾರೆ. ಭ್ರಷ್ಟಾಚಾರ ನಿರ್ಮೂಲನಾ ಅಧಿನಿಯಮ, 1988 ರ ಅಡಿಯಲ್ಲಿ ನೋಂದಾಯಿಸಲಾಗುವ ಪ್ರಕರಣಗಳನ್ನು ಪೊಲೀಸ್ ವಿಭಾಗ ತನಿಖೆ ಮಾಡುತ್ತದೆ. ಕರ್ನಾಟಕ ಲೋಕಾಯುಕ್ತ ಕಾಯಿದೆ, 1984 ರ ಷರತ್ತುಗಳ ಅಡಿಯಲ್ಲಿ ನೋಂದಾಯಿಸಲಾಗುವ ದೂರುಗಳ ತನಿಖೆಯನ್ನು ಕೈಗೊಳ್ಳಲು ಲೋಕಾಯುಕ್ತ/ಉಪಲೋಕಾಯುಕ್ತರು ಸೂಚಿಸಿದಾಗ ಸಹ ಪೊಲೀಸ್ ವಿಭಾಗ ತನಿಖೆ ನಡೆಸುತ್ತದೆ.

        ಈ ಕಾಯಿದೆ ಸಾರ್ವಜನಿಕ ಕುಂದುಕೊರತೆಗಳಿಗೆ ಮತ್ತು ಆರೋಪಗಳಿಗೆ ಸಂಬಂಧಪಟ್ಟ ಸ್ವಯಂ ಪ್ರೇರಿತ ತನಿಖೆಗಳನ್ನು ಕೈಗೊಳ್ಳಲೂ ಲೋಕಾಯುಕ್ತ ಮತ್ತು ಉಪಲೋಕಾಯುಕ್ತರಿಗೆ ಅಧಿಕಾರವನ್ನು ನೀಡುತ್ತದೆ. ಸಾರ್ವಜನಿಕ ಹಿತಾಸಕ್ತಿಯಿಂದ ಕೂಡಿದ ಅನೇಕ ಪ್ರಕರಣಗಳಲ್ಲಿ ಲೋಕಾಯುಕ್ತ ಮತ್ತು ಉಪಲೋಕಾಯುಕ್ತರು ಸ್ವಯಂ ಪ್ರೇರಿತರಾಗಿ ತನಿಖೆಗಳನ್ನು ಕೈಗೊಂಡಿದ್ದು ಸಾಮಾನ್ಯ ಜನರ ಕುಂದುಕೊರತೆಗಳನ್ನು ಪರಿಹರಿಸಲು ಸೂಕ್ತ ಕ್ರಮಗಳನ್ನು ಕೈಗೊಳ್ಳಲಾಗಿರುತ್ತದೆ.

        ಮೇಲ್ಕಂಡ ಸನ್ನಿವೇಶಗಳಲ್ಲದೆ ಕಾಲಕಾಲಕ್ಕೆ ಲೋಕಾಯುಕ್ತರು ನೀಡುವ ಆದೇಶಗಳ ಹಿನ್ನೆಲೆಯಲ್ಲಿ ಜನಸಾಮಾನ್ಯರ ಕುಂದುಕೊರತೆಗಳನ್ನು ಪರಿಹರಿಸಲು ಪೊಲೀಸ್ ಅಧಿಕಾರಿಗಳು ಹಲವಾರು ಸರ್ಕಾರಿ ಕಛೇರಿಗಳಿಗೆ ಭೇಟಿ ನೀಡುತ್ತಾರೆ. ಗೌರವಾನ್ವಿತ ಲೋಕಾಯುಕ್ತರು ಪೊಲೀಸ್ ವಿಭಾಗಕ್ಕೆ ತಾಲ್ಲೂಕು ಸ್ಥಳಗಳಿಗೆ ಭೇಟಿ ನೀಡಿ ಸಾಮಾನ್ಯ ಜನರಿಂದ ಅರ್ಜಿ/ದೂರುಗಳನ್ನು ಸ್ವೀಕರಿಸುವ ಮೂಲಕ ಅವರ ಕುಂದುಕೊರತೆಗಳನ್ನು ಪರಿಹರಿಸಲು ಸೂಕ್ತ ಕ್ರಮಗಳನ್ನು ಕೈಗೊಳ್ಳುವ ಅಧಿಕಾರವನ್ನು ನೀಡಿರುತ್ತಾರೆ. ದಿನಾಂಕ: 14/03/2016 ರ ಸರ್ಕಾರಿ ಅಧಿಸೂಚನೆಯಲ್ಲಿ ಭ್ರಷ್ಟಾಚಾರ ನಿರ್ಮೂಲನಾ ಅಧಿನಿಯಮ, 1988 ರ ಅಡಿಯಲ್ಲಿ ಪ್ರಕರಣಗಳನ್ನು ನೋಂದಾಯಿಸಿ ತನಿಖೆಯನ್ನು ನಡೆಸಲು ಸರ್ಕಾರ ಭ್ರಷ್ಟಾಚಾರ ನಿಗ್ರಹ ದಳವನ್ನು ರಚಿಸಿರುತ್ತದೆ. ಇದನ್ನು ಗೌರವಾನ್ವಿತ ಉಚ್ಛ ನ್ಯಾಯಾಲಯದಲ್ಲಿ ರಿಟ್ ಅರ್ಜಿ ಸಂಖ್ಯೆ 19386/2016 ರಲ್ಲಿ ಪ್ರಶ್ನಿಸಲಾಗಿದ್ದು ದಿನಾಂಕ: 07/04/2016 ರಲ್ಲಿ ನೀಡಲಾದ ಮಧ್ಯಂತರ ಆದೇಶದಲ್ಲಿ ಕರ್ನಾಟಕ ಲೋಕಾಯುಕ್ತ ಸಂಸ್ಥೆಯಲ್ಲಿ ಪೊಲೀಸ್ ವಿಭಾಗದಲ್ಲಿ ತನಿಖೆಗಾಗಿ ಬಾಕಿ ಇರುವ ಪ್ರಕರಣಗಳನ್ನು ಹೊಸದಾಗಿ ರೂಪಿಸಲಾದ ಭ್ರಷ್ಟಾಚಾರ ವಿರೋಧಿ ದಳಕ್ಕೆ ವರ್ಗಾಯಿಸಬಾರದೆಂದು ಮತ್ತು ಆ ಪ್ರಕರಣಗಳ ತನಿಖೆ ಕರ್ನಾಟಕ ಲೋಕಾಯುಕ್ತ ಸಂಸ್ಥೆಯಲ್ಲೇ ಮುಂದುವರೆಯತಕ್ಕುದೆಂದು ಗೌರವಾನ್ವಿತ ಉಚ್ಛ ನ್ಯಾಯಾಲಯ ನಿರ್ದೇಶಿಸಿದೆ. ಸದರಿ ರಿಟ್ ಅರ್ಜಿಯಲ್ಲಿ ಲೋಕಾಯುಕ್ತ ಸಂಸ್ಥೆ ದಾಖಲಿಸಿದ ಮಧ್ಯಂತರ ಅರ್ಜಿಯಲ್ಲಿ ದಿನಾಂಕ: 12/02/2021 ರ ಆದೇಶದಲ್ಲಿ ತಪ್ಪಿತಸ್ಥ ನೌಕರರ ವಿರುದ್ಧ ಸಂದರ್ಭಾನುಸಾರ ಲೋಕಾಯುಕ್ತರಾಗಲೀ ಅಥವಾ ಉಪಲೋಕಾಯುಕ್ತರಾಗಲೀ ಅಗತ್ಯವಾದ ಶಿಸ್ತು ಕ್ರಮಗಳನ್ನು ಕೈಗೊಳ್ಳಲು ಸಾಧ್ಯವಾಗುವಂತೆ ಭ್ರಷ್ಟಾಚಾರ ನಿರ್ಮೂಲನಾ ಅಧಿನಿಯಮದ ಅಡಿಯಲ್ಲಿ ಶಿಕ್ಷಾರ್ಹವಾದ ಅಪರಾಧಗಳಲ್ಲಿ ಹಲವು ನ್ಯಾಯಾಲಯಗಳ ಮುಂದೆ ಭ್ರಷ್ಟಾಚಾರ ನಿಗ್ರಹ ದಳ ಸಲ್ಲಿಸಿರುವ ಎಲ್ಲಾ ಆರೋಪಪಟ್ಟಿಗಳನ್ನು ನಿಬಂಧಕರು, ಕರ್ನಾಟಕ ಲೋಕಾಯುಕ್ತ ಸಂಸ್ಥೆಗೆ ರವಾನಿಸಲು ಗೌರವಾನ್ವಿತ ಉಚ್ಛ ನ್ಯಾಯಾಲಯ ನಿರ್ದೇಶಿಸಿರುತ್ತದೆ. ಸದರಿ ಆದೇಶದ ಮೇರೆಗೆ ಭ್ರಷ್ಟಾಚಾರ ವಿರೋಧಿ ದಳದಿಂದ ದಾಖಲಿಸಿದ ಎಲ್ಲಾ ಆರೋಪಪಟ್ಟಿಗಳ ಪ್ರತಿಗಳನ್ನು ಈ ಸಂಸ್ಥೆಗೆ ರವಾನಿಸಲಾಗಿದ್ದು ಸಂದರ್ಭಕ್ಕೆ ಅನುಗುಣವಾಗಿ ಲೋಕಾಯುಕ್ತರಾಗಲೀ ಅಥವಾ ಉಪಲೋಕಾಯುಕ್ತರಾಗಲೀ ತನಿಖೆಯನ್ನು ಕೈಗೊಂಡು ಅಗತ್ಯವಾದ ಸಂದರ್ಭಗಳಲ್ಲಿ ಸೂಕ್ತ ಶಿಫಾರಸ್ಸುಗಳನ್ನು ಮಾಡಲಾಗಿರುತ್ತದೆ.

        ಕರ್ನಾಟಕ ಲೋಕಾಯುಕ್ತ ಕಾಯಿದೆ, 1984 ರ ಷರತ್ತುಗಳ ಅಡಿಯಲ್ಲಿ ನೀಡಲಾದ ಅಧಿಕಾರಗಳು ಮತ್ತು ಕಾರ್ಯಾಚರಣೆಗಳೊಡನೆ ಕರ್ನಾಟಕ ನಾಗರೀಕ ಸೇವೆಗಳು (ವರ್ಗೀಕರಣ, ನಿಯಂತ್ರಣ ಮತ್ತು ಮೇಲ್ಮನವಿ) ನಿಯಮಾವಳಿಗಳು, 1957 ರ ನಿಯಮ 14-ಎ ರ ಅಡಿಯಲ್ಲಿ ಸಕ್ಷಮ ಪ್ರಾಧಿಕಾರ ಸಂಸ್ಥೆಗೆ ವಹಿಸುವ ಶಿಸ್ತು ವಿಚಾರಣೆಗಳನ್ನು ಸಹ ಈ ಸಂಸ್ಥೆ ನಡೆಸುತ್ತಿದ್ದು ವಿಚಾರಣೆ ಪೂರ್ಣಗೊಂಡ ನಂತರ ವಿಚಾರಣಾಧಿಕಾರಿಗಳ ತೀರ್ಮಾನಗಳನ್ನು ಮತ್ತು ಸಂದರ್ಭಾನುಸಾರ ಲೋಕಾಯುಕ್ತರ ಅಥವಾ ಉಪಲೋಕಾಯುಕ್ತರ ಶಿಫಾರಸ್ಸುಗಳನ್ನು ಅಗತ್ಯ ಕ್ರಮಗಳನ್ನು ಕೈಗೊಳ್ಳಲು ಸರ್ಕಾರಕ್ಕೆ ಕಳುಹಿಸಲಾಗುವುದು.

        ಸಂಸ್ಥೆಗೆ ಸಂಬಂಧಿಸಿದ ಅಂಕಿ-ಅಂಶಗಳನ್ನು ಮತ್ತು ಪ್ರಕರಣಗಳ ವಿಲೇವಾರಿಗೆ ಸಂಬಂಧಿಸಿದ ಇತರೆ ವಿವರಗಳನ್ನು ಈ ಜಾಲತಾಣದಲ್ಲಿ (ಅಪ್‍ಲೋಡ್) ಒದಗಿಸಲಾಗಿದೆ.