Karnataka Lokayukta
Karnataka Lokayukta

ಕರ್ನಾಟಕ ಲೋಕಾಯುಕ್ತ ನಿಯಮಾವಳಿಗಳು, 1985 ಅಧಿಸೂಚನೆ ಸಂಖ್ಯೆ: ಸಿಆಸುಇ/3/ಕೆಎಲ್ಯು/84/ಬೆಂಗಳೂರು, ದಿನಾಂಕ: 8ನೇ ಜುಲೈ 1985

ಕರ್ನಾಟಕ ಲೋಕಾಯುಕ್ತ ಅಧಿನಿಯಮ, 1984 (1985 ರ ಕರ್ನಾಟಕ ಅಧಿನಿಯಮ 4) ರ ಕಲಂ 23 ರಲ್ಲಿ ಪ್ರದತ್ತವಾದ ಅಧಿಕಾರವನ್ನು ಚಲಾಯಿಸುತ್ತಾ ಕರ್ನಾಟಕ ರಾಜ್ಯ ಸರ್ಕಾರ ಈ ಕೆಳಕಂಡ ನಿಯಮಾವಳಿಗಳನ್ನು ರೂಪಿಸುತ್ತದೆ::-

1. ಶೀರ್ಷಿಕೆ ಮತ್ತು ಪ್ರಾರಂಭ:-
  1. ಈ ನಿಯಮಾವಳಿಗಳನ್ನು ಕರ್ನಾಟಕ ಲೋಕಾಯುಕ್ತ ನಿಯಮಾವಳಿಗಳು, 1985 ಎಂದು ಕರೆಯಬಹುದು.
  2. ಈ ನಿಯಮಾವಳಿಗಳು ಅಧಿಕೃತ ರಾಜ್ಯ ಪ್ರಪತ್ರದಲ್ಲಿ ಪ್ರಕಟಗೊಂಡ ದಿನಾಂಕದಿಂದ ಜಾರಿಗೆ ಬರತಕ್ಕದ್ದು.
2. ವ್ಯಾಖ್ಯೆಗಳು.-ಈ ನಿಯಮಾವಳಿಗಳಲ್ಲಿ ಸಂದರ್ಭವು ಅನ್ಯಥಾ ಅಗತ್ಯಪಡಿಸುವ ಹೊರತು ,
  1. “ಅಧಿನಿಯಮ” ಎಂದರೆ ಕರ್ನಾಟಕ ಲೋಕಾಯುಕ್ತ ಅಧಿನಿಯಮ, 1984 (1985 ರ ಕರ್ನಾಟಕ ಅಧಿನಿಯಮ 4);
  2. “ದೂರುದಾರ” ಎಂದರೆ ಅಧಿನಿಯಮದ ಕಲಂ 9 ರ ಅಡಿಯಲ್ಲಿ ದೂರು ನೀಡುವ ವ್ಯಕ್ತಿ.
  3. ಅರ್ಜಿ/ನಮೂನೆ ಎಂದರೆ ಈ ನಿಯಮದಡಿ ಅನುಬಂಧಿಸಿರುವ ನಮೂನೆ.
      “ನಿಬಂಧಕರು” ಎಂದರೆ ಲೋಕಾಯುಕ್ತ ಸಂಸ್ಥೆಯ ನಿಬಂಧಕರು ಮತ್ತು ಹೆಚ್ಚುವರಿ ನಿಬಂಧಕರು, ಉಪ ನಿಬಂಧಕರು ಮತ್ತು ಸಹಾಯಕ ನಿಬಂಧಕರನ್ನು ಒಳಗೊಂಡಿರುತ್ತದೆ;
  4. ಬಿಟ್ಟುಬಿಡಲಾಗಿದೆ
  5. “ಕಲಂ” ಎಂದರೆ ಅಧಿನಿಯಮದ ಕಲಂ
  6. ಈ ನಿಯಮಾವಳಿಗಳಲ್ಲಿ ಬಳಸಲಾದ ಆದರೆ ವ್ಯಾಖ್ಯಾನಿಸದೇ ಇರುವ ಇತರೆ ಎಲ್ಲಾ ಪದಗಳೂ ಮತ್ತು ಅಭಿವ್ಯಕ್ತಿಗಳೂ ಅಧಿನಿಯಮದಲ್ಲಿ ಅವುಗಳಿಗೆ ನೀಡಲಾಗಿರುವ ಅದೇ ಅರ್ಥವನ್ನು ಅನುಕ್ರಮವಾಗಿ ಹೊಂದಿರತಕ್ಕದ್ದು.
3. ಸಕ್ಷಮ ಪ್ರಾಧಿಕಾರ.- ಕಲಂ 2 ರ ಖಂಡ (4) ರ ಉಪಖಂಡ (ಡಿ) ರಲ್ಲಿ ಉಲ್ಲೇಖ ಮಾಡಿರುವಂತೆ ಸರ್ಕಾರಿ ನೌಕರನಿಗೆ ಸಂಬಂಧಿಸಿ ಕರ್ನಾಟಕ ರಾಜ್ಯ ಸರ್ಕಾರ ಸಕ್ಷಮ ಪ್ರಾಧಿಕಾರವಾಗತಕ್ಕದ್ದು.
4. ದೂರು:-
  1. ಫಿರ್ಯಾದಿ ಪ್ರತಿಯೊಂದು ದೂರನ್ನು ದಾಖಲಿಸುವಾಗ ನಮೂನೆ-1 ರಲ್ಲಿ ದಾಖಲಿಸತಕ್ಕದ್ದು. ಯಾವುದೇ ಪ್ರಥಮ ದರ್ಜೆ ನ್ಯಾಯಾಧೀಶರ, ಸಾರ್ವಜನಿಕ ದಸ್ತಾವೇಜು ಪ್ರಮಾಣಾಧಿಕಾರಿಗಳ ಪ್ರಮಾಣಪತ್ರ, ಆಯುಕ್ತರ ಅಥವಾ ಪ್ರಮಾಣವಚನವನ್ನು ಬೋಧಿಸಲು ಅಧಿಕೃತಗೊಳಿಸಿರುವ ಯಾವುದೇ ಪತ್ರಾಂಕಿತ ಅಧಿಕಾರಿಯ ಎದುರು ಪ್ರಮಾಣೀಕರಿಸಿರುವ ನಮೂನೆ-2 ರ ಶಪಥಪತ್ರವನ್ನು ಅದಕ್ಕೆ ಪೂರಕವಾಗಿ ಸಲ್ಲಿಸತಕ್ಕದ್ದು.
  2. ದೂರನ್ನು ಫಿರ್ಯಾದಿಯು ಸ್ವತಃ ಸಲ್ಲಿಸಬಹುದು ಅಥವಾ ನಿಬಂಧಕರಿಗೆ ನೋಂದಾಯಿತ ಅಂಚೆಯ ಮುಖಾಂತರ ಸಲ್ಲಿಸಬಹುದು. ಅಂತಹ ದೂರನ್ನು ಯಾವ ಸರ್ಕಾರಿ ನೌಕರನ ವಿರುದ್ಧವಾಗಿ ದಾಖಲಿಸಲಾಗಿರುತ್ತದೋ ಆ ವ್ಯಕ್ತಿಯ ಹೆಸರನ್ನು ಮತ್ತು ಪದನಾಮವನ್ನು ಸ್ಪಷ್ಟಪಡಿಸಿ ನಿಬಂಧಕರು ಅಂತಹ ದೂರನ್ನು ಅಂಗೀಕರಿಸತಕ್ಕದ್ದು.
5.ದೂರುಗಳ ನೋಂದಣಿ ಮತ್ತು ಪರಿಶೀಲನೆ.-
  1. ದೂರನ್ನು ಸ್ವೀಕರಿಸಿದ ನಂತರ ನಿಬಂಧಕರು ದೂರಿನಲ್ಲಿರುವ ವಿವರಗಳನ್ನು ಯಥಾವತ್ತಾಗಿ “ದೂರುಗಳ ವಹಿ”ಯಲ್ಲಿ ನಮೂನೆ 2-ಎ ರಲ್ಲಿ ದಾಖಲಿಸುವಂತೆ ಮಾಡತಕ್ಕದ್ದು.
  2. ಯಾವುದೇ ಅಂತಹ ದೂರು ಅಧಿನಿಯಮದ ಅಥವಾ ನಿಯಮಾವಳಿಗಳ ಪ್ರವರ್ಗಗಳಿಗೆ ಅನುಸಾರವಾಗಿ ಇರುವುದಿಲ್ಲವೆಂದು ನಿಬಂಧಕರು ಅಭಿಪ್ರಾಯಪಟ್ಟಲ್ಲಿ, ದೂರನ್ನು ಸ್ವೀಕರಿಸಿದ ದಿನಾಂಕದಿಂದ ಸಾರ್ವತ್ರಿಕ ರಜಾ ದಿನವನ್ನು ಹೊರತುಪಡಿಸಿ ಹದಿನೈದು ದಿನಗಳ ಒಳಗಾಗಿ ನಮೂನೆ-3 ರಲ್ಲಿ ನಿಗದಿಪಡಿಸಲಾದ ದಿನಾಂಕದ ಒಳಗಾಗಿ ದೂರಿನಲ್ಲಿರುವ ಲೋಪಗಳನ್ನು ಸರಿಪಡಿಸಿ ಕಳುಹಿಸುವಂತೆ ಫಿರ್ಯಾದಿಗೆ ಸೂಚನಾಪತ್ರವನ್ನು ನೀಡತಕ್ಕದ್ದು. ಅಗತ್ಯವಾದ ಕಾರಣಗಳಿದ್ದಲ್ಲಿ ಸೂಚನಾಪತ್ರದಲ್ಲಿ ನಿಗದಿಪಡಿಸಿದ ಅವಧಿಯನ್ನು ನಿಬಂಧಕರು ವಿಸ್ತರಿಸಬಹುದು.
  3. ಎಲ್ಲಾ ದೂರುಗಳನ್ನು ಸಂದರ್ಭಕ್ಕೆ ಅನುಗುಣವಾಗಿ ಲೋಕಾಯುಕ್ತರ ಅಥವಾ ಉಪಲೋಕಾಯುಕ್ತರ ಆದೇಶಕ್ಕಾಗಿ ಪ್ರಸ್ತುತಪಡಿಸತಕ್ಕದ್ದು; ಆದರೆ ಉಪ ನಿಯಮ (2) ರ ಅಡಿಯಲ್ಲಿ ಕ್ರಮವನ್ನು ಕೈಗೊಂಡಿರತಕ್ಕ ದೂರುಗಳಿಗೆ ಸಂಬಂಧಿಸಿ ನಿಬಂಧಕರು ಗಮನಸೆಳೆದಂತಹ ಯಾವುದೇ ಲೋಪವನ್ನು ಸರಿಪಡಿಸಿದ್ದಲ್ಲಿ ಅಥವಾ ಸರಿಪಡಿಸದೇ ಇದ್ದಲ್ಲಿ ಸಹ ಸೂಚನಾಪತ್ರದಲ್ಲಿ ನಿಗದಿಪಡಿಸಿದ ಅವಧಿಗಿಂತಲೂ ವಿಸ್ತರಣಾವಧಿಯನ್ನು ಮೀರಿದ್ದಲ್ಲಿ ಮಾತ್ರ ಪ್ರಸ್ತುತಪಡಿಸಬೇಕು.
  4. ಉಪ ನಿಯಮ (1) ರ ಅಡಿಯಲ್ಲಿ ದೂರನ್ನು ದಾಖಲಿಸುವ ಪ್ರತಿ ಫಿರ್ಯಾದಿಗೂ ಅವನ ದೂರಿಗೆ ಸಂಬಂಧಿಸಿ ಮುಂದೆ ಯಾವುದೇ ಕ್ರಮವನ್ನು ಕೈಗೊಳ್ಳಲಾಗದು ಎನ್ನುವುದಕ್ಕಾಗಿ ಉಪ ನಿಯಮ (3) ರ ಅಡಿಯಲ್ಲಿ ನೀಡಲಾದ ಆದೇಶಗಳ ಸಂಕ್ಷಿಪ್ತವಾದ ಮಾಹಿತಿಯನ್ನು ನೀಡತಕ್ಕದ್ದು.
6. ಲೋಕಾಯುಕ್ತ ಮತ್ತು ಉಪಲೋಕಾಯುಕ್ತರ ಭತ್ಯೆಗಳು ಮತ್ತು ಸೇವಾ ಷರತ್ತುಗಳು:-
  1. ಈ ನಿಯಮಾವಳಿಗಳಲ್ಲಿ ಹೊರತುಪಡಿಸಿರುವಂತೆ:-
    1. ಲೋಕಾಯುಕ್ತರ (ತುಟ್ಟಿಭತ್ಯೆಯನ್ನು ಹೊರತುಪಡಿಸಿ) ಭತ್ಯೆಗಳು, ನಿವೃತ್ತಿ ವೇತನ ಮತ್ತು ಸೇವೆಗೆ ಸಂಬಂಧಿಸಿದ ಇತರೆ ಷರತ್ತುಗಳು ಭಾರತದ ಸವೋಚ್ಛ ನ್ಯಾಯಾಲಯದ ಮುಖ್ಯ ನ್ಯಾಯಾಧೀಶರಿಗೆ ಅನ್ವಯಿಸುವುದಕ್ಕೆ ಸಮಾನಾಂತರವಾಗಿ ಇರತಕ್ಕದ್ದು;
    2. ಉಪ ಲೋಕಾಯುಕ್ತರ (ತುಟ್ಟಿಭತ್ಯೆಯನ್ನು ಹೊರತುಪಡಿಸಿ) ಭತ್ಯೆಗಳು, ನಿವೃತ್ತಿ ವೇತನ ಮತ್ತು ಸೇವೆಗೆ ಸಂಬಂಧಿಸಿದ ಇತರೆ ಷರತ್ತುಗಳು ಉಚ್ಛ ನ್ಯಾಯಾಲಯದ ಮುಖ್ಯ ನ್ಯಾಯಾಧೀಶರಿಗೆ ಅನ್ವಯಿಸುವುದಕ್ಕೆ ಸಮಾನಾಂತರವಾಗಿ ಇರತಕ್ಕದ್ದು. 1-ಎ: ಉಪ ನಿಯಮ (1) ರಲ್ಲಿ ಏನೇ ಇದ್ದಾಗ್ಯೂ ಲೋಕಾಯುಕ್ತ ಅಥವಾ ಉಪಲೋಕಾಯುಕ್ತರು ಅವರು ಈ ಹಿಂದೆ ಕೇಂದ್ರ ಸರ್ಕಾರ ಅಥವಾ ಯಾವುದೇ ಇತರೆ ರಾಜ್ಯ ಸರ್ಕಾರಗಳಿಗೆ ಸಂಬಂಧಿಸಿದಂತೆ ಅವರು ಪಡೆಯುವ ನಿವೃತ್ತಿವೇತನ ಮತ್ತು ಇತರೆ ಪ್ರಯೋಜನಗಳಿಗೆ ಅವರು ಅರ್ಹರಾಗಿದ್ದಾಗ್ಯೂ ಈ ನಿಯಮಾವಳಿಗಳಿಗೆ ಅನುಗುಣವಾಗಿ ನಿವೃತ್ತಿವೇತನ ಮತ್ತು ಡಿ.ಸಿ.ಆರ್.ಜಿ-ಗಳಿಗೆ ಅರ್ಹರಾಗಿರುತ್ತಾರೆ.
  2. ಅವರ ಸೇವಾವಧಿಯ ಪ್ರತಿ ಸಂಪೂರ್ಣ ವರ್ಷಕ್ಕೆ ಸಂಬಂಧಿಸಿದಂತೆ ಜಮಾ ಮಾಡತಕ್ಕದ್ದು.:-
    1. ಲೋಕಾಯುಕ್ತರ ರಜೆ ಅವಧಿಯ ಎಪ್ಪತ್ತು ದಿನಗಳಿಗೆ ಪೂರ್ಣ ಭತ್ಯೆಯನ್ನು ಮತ್ತು ತೊಂಭತ್ತು ದಿನಗಳಿಗೆ ಅರ್ಧ ಭತ್ಯೆಯನ್ನು
    2. ಉಪ ಲೋಕಾಯುಕ್ತರ ರಜಾ ಅವಧಿಯ ನಲವತ್ತೆರಡು ದಿನಗಳಿಗೆ ಪೂರ್ಣ ಭತ್ಯೆಯನ್ನು ಮತ್ತು ತೊಂಭತ್ತು ದಿನಗಳಿಗೆ ಅರ್ಧ ಭತ್ಯೆಯನ್ನು ಪಾವತಿಸತಕ್ಕದ್ದು.
  3. ಯಾವುದೇ ಸಮಯದಲ್ಲಿ ಅವರ ರಜಾ ಲೆಕ್ಕದಲ್ಲಿ ಲೋಕಾಯುಕ್ತರಿಗಾಗಲೀ ಉಪ ಲೋಕಾಯುಕ್ತರಿಗಾಗಲೀ ಯಾವುದೇ ರಜೆ ಇಲ್ಲದೆ ಇದ್ದಾಗ್ಯೂ ಅವರು ಭತ್ಯೆಸಹಿತ ಯಾವುದೇ ರಜೆಯನ್ನು ಬಳಸಿಕೊಂಡಿದ್ದಲ್ಲಿ ತರುವಾಯ ಅವರ ರಜೆಯ ಲೆಕ್ಕಕ್ಕೆ ಸೇರಬಹುದಾದ ಯಾವುದೇ ಅಂತಹ ರಜೆಯಿಂದ ಅವರ ರಜೆಯ ಲೆಕ್ಕವನ್ನು ಸರಿಪಡಿಸತಕ್ಕದ್ದು;
  4. ಎಲ್ಲಾ ಭತ್ಯೆಗಳೊಡನೆ ಲೋಕಾಯುಕ್ತರಿಗೆ ಅಥವಾ ಉಪಲೋಕಾಯುಕ್ತರ ರಜೆಯ ಲೆಕ್ಕಕ್ಕೆ ಜಮೆ ಆಗಿದ್ದು ಅವರು ಯಾವುದೇ ಸಮಯದಲ್ಲಿ ಅಗತ್ಯವಿದ್ದಷ್ಟು ರÀಜೆಯನ್ನು ಬಳಸಿಕೊಳ್ಳಬಹುದಾಗಿರುತ್ತದೆ; ಅಂತಹ ಸಂದರ್ಭದಲ್ಲಿ ರಜಾ ಭತ್ಯೆಯ ಮಾಸಿಕ ದರ ಅವರ ಅವರ ಪೂರ್ಣ ರಜಾ ಅವಧಿಯ ಮಾಸಿಕ ವೇತನ ಮತ್ತು ಇತರೆ ಭತ್ಯೆಗಳ ದರಕ್ಕೆ ಸಮಾನವಾಗಿರತಕ್ಕದ್ದು.
  5. ಲೋಕಾಯುಕ್ತರಾಗಲೀ ಅಥವಾ ಉಪ ಲೋಕಾಯುಕ್ತರಾಗಲೀ ರಜೆಯನ್ನು ಬದಲಿಸಲು ವ್ಯಕ್ತಪಡಿಸಿದಲ್ಲಿ ಈ ಕೆಳಕಂಡ ಷರತ್ತುಗಳಿಗೆ ಬದ್ಧವಾಗಿ ಅವರ ಅರ್ಧ ಭತ್ಯೆಗಳಿಗೆ ಪೂರ್ಣ ಭತ್ಯೆಗಳನ್ನು ಯಾವುದೇ ಸಮಯದಲ್ಲಿ ಪಡೆಯಬಹುದಾಗಿರುತ್ತದೆ: :-
    1. ಈ ಉಪ ನಿಯಮದ ಅಡಿಯಲ್ಲಿ ಅವರು ಪೂರ್ಣ ಭತ್ಯೆಗಳ ಸಹಿತವಾಗಿ ಪಡೆದ ಒಟ್ಟು ರಜಾ ಅವಧಿ ಮೇಲೆ ಕಾಣಿಸಿದ ಉಪ ನಿಯಮ (4) ರಲ್ಲಿ ಉಲ್ಲೇಖಗೊಂಡ ರಜೆಗೆ ಸೇರತಕ್ಕದ್ದು; ಆದರೆ ಅವರ ಪೂರ್ಣ ಸೇವಾ ಅವಧಿಯಲ್ಲಿ ಕೊನೆಯದಾಗಿ ನಮೂದು ಮಾಡಲಾದ (ಅವರ ರಜೆಯ ಲೆಕ್ಕಕ್ಕೆ ಪೂರ್ಣ ಭತ್ಯೆ ಸಹಿತವಾಗಿ ಸೇರಿಸಲಾದ ರಜೆಯ ರಜೆಯ ಅವಧಿಯನ್ನೂ ಒಳಗೊಂಡಂತೆ) ಇಪ್ಪತ್ತನಾಲ್ಕನೆರ ಒಂದು ಭಾಗದ ಅವಧಿಯನ್ನು ಮೀರತಕ್ಕದ್ದಲ್ಲ; ಇದರೊಡನೆ ವೈದ್ಯಕೀಯ ಆಧಾರದ ಮೇಲೆ ಗರಿಷ್ಠ ಮೂರು ತಿಂಗಳು ಮತ್ತು
    2. ಈ ಉಪ ನಿಯಮದ ಅಡಿಯಲ್ಲಿ ಪೂರ್ಣ ಭತ್ಯೆಗಳೊಡನೆ ರಜಾ ಅವಧಿಯಲ್ಲಿ ಲೋಕಾಯುಕ್ತರಿಗೆ ಮತ್ತು ಉಪ ಲೋಕಾಯುಕ್ತರಿಗೆ ಪಾವತಿಸಹುದಾದ ರಜಾ ಭತ್ಯೆಯ ಮಾಸಿಕ ದರ ಅನುಕ್ರಮವಾಗಿ ಸರ್ವೋಚ್ಛ ನ್ಯಾಯಾಧೀಶರ (ಸೇವಾ ಷರತ್ತುಗಳ) ಅಧಿನಿಯಮ, 1958 (1958 ರ ಕೇಂದ್ರ ಅಧಿನಿಯಮದ 41À) ರ ಕಲಂ 9 ಹಾಗೂ ಉಚ್ಛ ನ್ಯಾಯಾಧೀಶರ (ಸೇವಾ ಷರತ್ತುಗಳ) ಅಧಿನಿಯಮ, 1954 (1954 ರ ಕೇಂದ್ರ ಅಧಿನಿಯಮದ 28) ಅನ್ವಯವಾಗುತಕ್ಕದ್ದು.
  6. ಈ ನಿಯಮದ ಪ್ರವರ್ಗಗಳ ಅಡಿಯಲ್ಲಿ ಲೋಕಾಯುಕ್ತ ಅಥವಾ ಉಪ ಲೋಕಾಯುಕ್ತರು ಅರ್ಹರಾಗುವ ರಜೆಗಳಲ್ಲಿ ಅವರಿಗೆ ತಮ್ಮ ರಜೆಯನ್ನು ತಾವೇ ಮಂಜೂರು ಮಾಡಿಕೊಳ್ಳಲು ಅಥವಾ ಈಗಾಗಲೇ ಮಂಜೂರಾದ ರಜೆಯನ್ನು ತಡೆಹಿಡಿಯಲು ಅಥವಾ ಕಡಿಮೆಮಾಡಿಕೊಳ್ಳಲು ಅರ್ಹರಾಗಿರುತ್ತಾರೆ;
  7. ಯಾವುದೇ ಕ್ಯಾಲೆಂಡರ್ ವರ್ಷದ ಅಂತ್ಯಕ್ಕೆ ಲೋಕಾಯುಕ್ತ ಅಥವಾ ಉಪ ಲೋಕಾಯುಕ್ತರ ರಜಾ ಬಾಕಿಯ ಕ್ರೆಡಿಟ್ ಅಥವಾ ಡೆಬಿಟ್ ಲೆಕ್ಕವನ್ನು ಅದರ ಒಟ್ಟು ಮೊತ್ತಕ್ಕೆ ಯಾವುದೇ ಮಿತಿ ಇಲ್ಲದಂತೆ ಮುಂದಿನ ಕ್ಯಾಲೆಂಡರ್ ವರ್ಷಕ್ಕೆ ರಜಾ ಬಾಕಿಯನ್ನು ಸೇರಿಸತಕ್ಕದ್ದು;
  8. ಲೋಕಾಯುಕ್ತ ಅಥವಾ ಉಪ ಲೋಕಾಯುಕ್ತರು ಅವರ ಸೇವಾ ಅವಧಿಯ ಅಂತ್ಯಕ್ಕೆ ಪೂರ್ಣ ಭತ್ಯೆ ಸಹಿತವಾಗಿ ಗರಿಷ್ಠ 300 ದಿನಗಳ ಮಿತಿಗೆ ಬದ್ಧವಾಗಿ (ಅರ್ಧ ಭತ್ಯೆಗಳ ರಜಾ ಪರಿವರ್ತನೆಯನ್ನೂ ಒಳಗೊಂಡಂತೆ) ರಜಾ ನಗದೀಕರಣಕ್ಕೆ ಅರ್ಹರಾಗಿರುತ್ತಾರೆ;
  9. ಗಳಿಸದ ರಜೆಯನ್ನು, ವಿಶೇಷ ಅಂಗವೈಕಲ್ಯ ರಜೆಯನ್ನು ಅಥವಾ ಅಸಾಧಾರಣ ರಜೆಯನ್ನು ಲೋಕಾಯುಕ್ತ ಅಥವಾ ಉಪ ಲೋಕಾಯುಕ್ತರಿಗೆ ಮಂಜೂರು ಮಾಡುವ ಸಕ್ಷಮ ಪ್ರಾಧಿಕಾರ ರಾಜ್ಯಪಾಲರಾಗಿರಬೇಕು;
  10. ಉಪ ನಿಯಮ (2) ರ ಅಡಿಯಲ್ಲಿ ಅವರ ರಜಾ ಖಾತೆಗೆ ಜಮೆ ಮಾಡಲಾದ ರಜೆಯೊಂದಿಗೆ ಲೋಕಾಯುಕ್ತ ಮತ್ತು ಉಪ ಲೋಕಾಯುಕ್ತರು ಈ ಕೆಳಕಂಡ ಷರತ್ತುಗಳಿಗೆ ಬದ್ಧವಾಗಿ ಸಾಂದರ್ಭಿಕ ರಜೆಯನ್ನು ಬಳಸಿಕೊಳ್ಳಬಹುದು: -
    1. ಅಂತಹ ರಜೆಯನ್ನು ಅನಿರೀಕ್ಷಿತ ಅನಾರೋಗ್ಯ ಮತ್ತು ತುರ್ತು ಮತ್ತು ಅನಿರೀಕ್ಷಿತ ಖಾಸಗಿ ವ್ಯವಹಾರವನ್ನು ಹೊರತುಪಡಿಸಿ ಬಳಸಬಾರದು ಮತ್ತು
    2. ಒಂದು ಕ್ಯಾಲೆಂಡರ್ ವರ್ಷದಲ್ಲಿ 14 ದಿನಗಳಿಗಿಂತಲೂ ಹೆಚ್ಚು ದಿನಗಳನ್ನು ಅಥವಾ 5 ದಿನಗಳಿಗಿಂತಲೂ ಹೆಚ್ಚಾಗಿ ಅವಿರತ ಅವಧಿಯವರೆಗೂ ಅಂತಹ ರಜೆಯನ್ನು ಬಳಸತಕ್ಕದ್ದಲ್ಲ
6.A. ಲೋಕಾಯುಕ್ತ ಮತ್ತು ಉಪ ಲೋಕಾಯುಕ್ತರ ಅಧಿಕೃತ ನಿವಾಸ: -
  1. ಅವರ ಅಧಿಕಾರದ ಪೂರ್ಣಾವಧಿಯವರೆಗೂ ಉಚಿತವಾದ ಸುಸಜ್ಜಿತ ಅಧಿಕೃತ ನಿವಾಸವನ್ನು ಉಪಯೋಗಿಸಲು ಅರ್ಹರಾಗಿರುತ್ತಾರೆ ಹಾಗೂ ಅವರ ಅಧಿಕಾರದ ಅವಧಿಯ ನಂತರವೂ ಒಂದು ತಿಂಗಳವರೆಗೆ ಅಥವಾ ಸರ್ಕಾರ ನಿರ್ಧರಿಸಬಹುದಾದ ಎರಡು ತಿಂಗಳಿಗೂ ಮೀರದ ವಿಸ್ತರಣಾವಧಿಯವರೆಗೆ ಉಪಯೋಗಿಸಬಹುದಾಗಿರುತ್ತದೆ.
  2. ಸರ್ಕಾರ ಅವರ ಅಧಿಕೃತ ನಿವಾಸದ ನಿರ್ವಹಣೆಯನ್ನು ಮಾಡತಕ್ಕದ್ದು.
  3. ಲೋಕಾಯುಕ್ತ ಅಥವಾ ಉಪ ಲೋಕಾಯುಕ್ತರು ಅವರ ಅಧಿಕಾರದ ಅವಧಿಯಲ್ಲಿ ಮರಣಿಸಿದ ಸಂದರ್ಭದಲ್ಲಿ ಲೋಕಾಯುಕ್ತ ಅಥವಾ ಉಪ ಲೋಕಾಯುಕ್ತರ ಕುಟುಂಬದ ಸದಸ್ಯರು ಅಂತಹ ಮರಣ ಸಂದರ್ಭದಿಂದ ನಂತರದ ಮೂರು ತಿಂಗಳ ಅವಧಿಯವರೆಗೂ ಅಧಿಕೃತ ನಿವಾಸವನ್ನು ಬಳಸಬಹುದಾಗಿರುತ್ತದೆ.
  4. ಲೋಕಾಯುಕ್ತ ಅಥವಾ ಉಪ ಲೋಕಾಯುಕ್ತರಿಗೆ ಅವರ ನೇಮಕಾತಿ ಆದ ಕೂಡಲೇ ಅಧಿಕೃತ ನಿವಾಸವನ್ನು ವ್ಯವಸ್ಥೆ ಮಾಡಲು ಆಗದಿದ್ದಲ್ಲಿ ಅವರಿಗೆ ಅಧಿಕೃತ ನಿವಾಸವನ್ನು ಕಲ್ಪಿಸಿಕೊಡುವವರೆಗೂ ಅವರು ಪಾವತಿಸುವಂತಹ ನಿಜವಾದ ಬಾಡಿಗೆ ಮೊತ್ತವನ್ನು (ಪಾವತಿಸುತ್ತಿದ್ದಲ್ಲಿ) ಆ ಹಣದ ಮರು ಪಾವತಿಯನ್ನು ಪಡೆಯಲು ಅವರು ಅರ್ಹರಾಗಿರುತ್ತಾರೆ.
  5. ಅಧಿಕೃತ ನಿವಾಸವನ್ನು ಬಳಸಲು ಲೋಕಾಯುಕ್ತರು ಇಚ್ಛಿಸದೇ ಇದ್ದ ಸಂದರ್ಭದಲ್ಲಿ ಅವರಿಗೆ ಪ್ರತಿ ತಿಂಗಳೂ 10000/- ರೂ.ಗಳ ಭತ್ಯೆಯನ್ನು ನೀಡತಕ್ಕದ್ದು ಹಾಗೂ ಅವರ ನಿವಾಸದಲ್ಲಿ ಬಳಸುವ 4320 ಕಿಲೋ ಲೀಟರ್ ನೀರಿನ ಬಳಕೆಯ ಮತ್ತು ವಾರ್ಷಿಕ 17000 ಯೂನಿಟ್ಗಳ ವಿದ್ಯುಚ್ಛಕ್ತಿ ಬಳಕೆಯ ವೆಚ್ಚದ ಮರುಪಾವತಿಗೆ ಅವರು ಅರ್ಹರಾಗಿರುತ್ತಾರೆ.
  6. ಅಧಿಕೃತ ನಿವಾಸವನ್ನು ಬಳಸಲು ಉಪ ಲೋಕಾಯುಕ್ತರು ಇಚ್ಛಿಸದೇ ಇದ್ದ ಸಂದರ್ಭದಲ್ಲಿ ಅವರಿಗೆ ಪ್ರತಿ ತಿಂಗಳೂ 2500/- ರೂ.ಗಳ ಭತ್ಯೆಯನ್ನು ನೀಡತಕ್ಕದ್ದು ಹಾಗೂ ಅವರ ನಿವಾಸದಲ್ಲಿ ಬಳಸುವ 3600 ಕಿಲೋ ಲೀಟರ್ ನೀರಿನ ಬಳಕೆಯ ಮತ್ತು ವಾರ್ಷಿಕ 10000 ಯೂನಿಟ್ಗಳ ವಿದ್ಯುಚ್ಛಕ್ತಿ ಬಳಕೆಯ ವೆಚ್ಚದ ಮರುಪಾವತಿಗೆ ಅವರು ಅರ್ಹರಾಗಿರುತ್ತಾರೆ.
ವಿವರಣೆ:-
  1. ಈ ನಿಯಮ ಮತ್ತು ನಿಯಮ 6-ಬಿ ಉದ್ದೇಶಕ್ಕಾಗಿ, “ಕುಟುಂಬ” ಎಂದರೆ, ಲೋಕಾಯುಕ್ತ ಅಥವಾ ಉಪ ಲೋಕಾಯುಕ್ತರ ಪತ್ನಿ ಅಥವಾ ಪತಿ ಅಥವಾ ಅವರನ್ನು ಆಧರಿಸಿರುವ ಅವರ ಮಕ್ಕಳು, ತಂದೆ-ತಾಯಿ, ಸಹೋದರರು ಮತ್ತು ಅವಿವಾಹಿತ ಸಹೋದರಿಯರು.
  2. “ಅಧಿಕೃತ ನಿವಾಸ” ಎಂದರೆ ಸರ್ಕಾರ ಮನವಿಯ ಮೇರೆಗೆ ಅಥವಾ ಬೇರೆ ರೀತಿಯಾಗಿ ಪಡೆದ ಸ್ವಂತದ ಅಥವಾ ಬಾಡಿಗೆಯ ಸ್ಥಳಾವಕಾಶವಾಗಿದ್ದು ಲೋಕಾಯುಕ್ತರಿಗೆ ಅಥವಾ ಉಪ ಲೋಕಾಯುಕ್ತರಿಗೆ ಬಾಡಿಗೆ ಇಲ್ಲದೆ ಹಂಚಿಕೆ ಮಾಡಲಾದ ನಿವಾಸ
  3. ಅಧಿಕೃತ ನಿವಾಸಕ್ಕೆ ಸಂಬಂಧಿಸಿದ “ನಿರ್ವಹಣೆ” ಸ್ಥಳೀಯ ತೆರಿಗೆಗಳ ಪಾವತಿ ಮತ್ತು ನೀರು ಮತ್ತು ವಿದ್ಯುಚ್ಛಕ್ತಿಗೆ ಸಂಬಂಧಿಸಿದ ಪಾವತಿಯನ್ನು ಒಳಗೊಂಡಿರುತ್ತದೆ
    ಅಂತಹ ಪಾವತಿ ಲೋಕಾಯುಕ್ತರಿಗೆ ಸಂಬಂಧಿಸಿದಂತೆ ವಾರ್ಷಿಕ ಗರಿಷ್ಠ 4320 ಕಿಲೋಲೀಟರ್ ನೀರಿನ ವೆಚ್ಚ ಮತ್ತು 17000 ಯೂನಿಟ್ಗಳಷ್ಟು ವಿದ್ಯುಚ್ಛಕ್ತಿ ವೆಚ್ಚಕ್ಕೆ ಸೀಮಿತವಾಗಿ ಹಾಗೂ ಉಪ ಲೋಕಾಯುಕ್ತರಿಗೆ ಸಂಬಂಧಿಸಿದಂತೆ ವಾರ್ಷಿಕ ಗರಿಷ್ಠ 3600 ಕಿಲೋಲೀಟರ್ ನೀರಿನ ವೆಚ್ಚ ಮತ್ತು 10000 ಯೂನಿಟ್ಗಳಷ್ಟು ವಿದ್ಯುಚ್ಛಕ್ತಿ ವೆಚ್ಚಕ್ಕೆ ಸೀಮಿತವಾಗಿ ಅವಕಾಶವನ್ನು ಕಲ್ಪಿಸಲಾಗಿದೆ.
6B. ಲೋಕಾಯುಕ್ತ ಅಥವಾ ಉಪ ಲೋಕಾಯುಕ್ತರು ತಮ್ಮ ಅಧಿಕಾರದ ಅವಧಿಯ ನಂತರವೂ ಅಧಿಕೃತ ನಿವಾಸದಲ್ಲಿ ತಮ್ಮ ವಾಸ್ತವ್ಯವನ್ನು ಮುಂದುವರೆಸಿದಲ್ಲಿ ದಂಡ ಸÀಹಿತ ಬಾಡಿಗೆ ಪಾವತಿ ಇತ್ಯಾದಿ: - ನಿಯಮ 6-ಎ ರ ಅಡಿಯಲ್ಲಿ ನಿಗದಿಪಡಿಸಿದ ಅವಧಿಯನ್ನು ಮೀರಿ ಲೋಕಾಯುಕ್ತ ಅಥವಾ ಉಪ ಲೋಕಾಯುಕ್ತ ಅಥವಾ ಅವರ ಕುಟುಂಬದ ಸದಸ್ಯರು ಅಧಿಕೃತ ನಿವಾಸದಲ್ಲಿ ತಮ್ಮ ವಾಸ್ತವ್ಯವನ್ನು ಮುಂದುವರೆಸಿದಲ್ಲಿ ಲೋಕಾಯುಕ್ತ ಅಥವಾ ಉಪ ಲೋಕಾಯುಕ್ತರಾಗಿ ಅವರು ಮುಂದುವರೆದಿದ್ದಲ್ಲಿ ಅವರು ಪ್ರತಿ ತಿಂಗಳೂ ಪಡೆಯಬಹುದಾಗಿದ್ದ ವೇತನದ ಶೇಕಡಾ 50 ರ ದರದಲ್ಲಿ ದಂಡ ಸಹಿತ ಬಾಡಿಗೆಯನ್ನು ಅವರ ಹೆಚ್ಚುವರಿ ವಾಸ್ತವ್ಯದ ಅವಧಿಗೆ ಪ್ರತಿ ತಿಂಗಳೂ ಪಾವತಿಸತಕ್ಕದ್ದು.
7.ಆಸ್ತಿ ವಿವರಣಾ ಪಟ್ಟಿ: ಕಲಂ 22 ರ ಅಡಿಯಲ್ಲಿ ಆಸ್ತಿ ಮತ್ತು ದಾಯಿತ್ವದ ವಿವರಣಾ ಪಟ್ಟಿ. ನಮೂನೆ IV (ಆಂಗ್ಲ ಭಾಷೆ) . ನಮೂನೆ IV (ಕನ್ನಡ ಭಾಷೆ)